ಅವಕಾಶ ಆಕಾಶದಷ್ಟು ಅಗಲ

‘ನನಗೂ ಒಂದು ಅವಕಾಶಕೊಡಿ. ಯಾರೂ ಕೊಡ್ತಾ ಇಲ್ಲ. ಏನ್ಮಾಡ್ಲಿ ಅಂತ ಗೊತ್ತಾಗ್ತಿಲ್ಲ’ ಎನ್ನೋರೇ ಹೆಚ್ಚು. ನನ್ನನ್ನು ಎಲ್ಲರೂ ತುಳಿದುಬಿಟ್ಟರು. ಅಂತ ಇನ್ನೊಬ್ಬರನ್ನು ಹಳಿಯುತ್ತಾ ಕಾಲ ಕಳೆಯುವರನ್ನು ನಮ್ಮ ಸುತ್ತಮುತ್ತಲು ನೋಡುತ್ತೇವೆ.
ಆದರೆ ನಮ್ಮ ಯೋಗ್ಯತೆ, ಶಕ್ತಿ, ಸಾಮರ್ಥ್ಯವೃದ್ಧಿಯ ಅರಿತು ಅವಕಾಶದ ಆಕಾಶದತ್ತ ನೋಡಬೇಕು. ಆಗ ಅದರ ವಿಸ್ತಾರ, ಹರವು ನಮಗೆ ಗೋಚರಿಸತೊಡುತ್ತದೆ. ಅದು ಎಲ್ಲಿದೆ. ಅದನ್ನು ಹೇಗೆ ಪಡೆಯಬೇಕು ಎಂಬ ಕಡೆಗೆ ಪ್ರಯತ್ನಿಸುವ ಅಗತ್ಯವಿದೆ. ಮೊದಲು ಸಿಗುವ ಅವಕಾಶ ಬಳಸಿಕೊಂಡು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಇಲ್ಲದಿದ್ದರೆ ಇನ್ನೊಬ್ಬರು ಆ ಜಾಗವನ್ನು ಆಕ್ರಮಿಸಿಕೊಂಡು ಬಿಟ್ಟಿರುತ್ತಾರೆ. ಆದ್ದರಿಂದ ಮೊದಲು ಎಲ್ಲೆಲ್ಲಿ ಏನೇನಿದೆಯೋ ಅದನ್ನು ಗಿಟ್ಟಿಸಿಕೊಳ್ಳಬೇಕು. ನಾವು ನಮ್ಮತನವನ್ನು ಪ್ರರ್ಶಿಸುವವರೆಗೆ, ಗೆಲ್ಲುವವರೆಗೆ ಯಾರೂ ನಮ್ಮನ್ನು ಬೆಳೆಸುವುದಿಲ್ಲ. ನುಗ್ಗಿ ಮುನ್ನುಗ್ಗಿದರೆ ಅಲ್ಲಿ ಹೊಸ ಬೆಳಕಿಂಡಿಗಳು ತೆರೆದುಕೊಳ್ಳುತ್ತವೆ.
ಅಥವಾ ನಾವು ನಮ್ಮ ಹೆಚ್ಚುಗಾರಿಕೆ ಎಲ್ಲಿದೆಯೋ ಆ ಕ್ಷೇತ್ರದಲ್ಲಿ ಅವಕಾಶಗಳನ್ನು ಸೃಷ್ಟಿ ಮಾಡಬೇಕು. ಉಳಿದವರಿಗೆ ಅವಕಾಶ ಕೊಡುವವರಾದಾಗ ನಮಗೂ ಕೊಡುವವರು ಬರುತ್ತಾರೆ. ಎಲ್ಲರೂ ನಮ್ಮನ್ನು ಗುರುತಿಸಿ, ಕರೆದು ವೇದಿಕೆ ನೀಡುತ್ತಾರೆ. ಅಗ ಸಮಾಜದಲ್ಲಿ ಗೌರವ, ಮನ್ನಣೆ ಲಭಿಸಲಾರಂಭಿಸುತ್ತದೆ. ನಮ್ಮದೇ ಆದ ಒಂದು ಸ್ಥಳವನ್ನು ಎಲ್ಲರ ಮನಸ್ಸಿನಲ್ಲಿ ಸೇರಿ ಉಳಿಯುವಂತೆ ಮಾಡುತ್ತದೆ.
ಒಂದು ಅವಕಾಶ, ಗೆಲುವು ಜೀವನದ ದಿಕ್ಕನ್ನೇ ಬದಲಾಯಿಸಬಲ್ಲುದು. ಹೊಸ ದಾರಿಗಳನ್ನು ತೆರೆದುಕೊಳ್ಳುವಂತೆ ಮಾಡುವಲ್ಲಿ ಅದು ಅವಶ್ಯಕ. ಚಿಕ್ಕದಾದ ಒಂದು ಅವಕಾಶ ಸಿಕ್ಕರೆ ಜಿರಳೆ ಮೀಸೆ ನುಗ್ಗಿಸಿ, ತನ್ನ ಇಡೀ ದೇಹದೊಂದಿಗೆ ಅದರೊಳ ಪ್ರವೇಶಿಸುತ್ತದೆ. ಚಿಕ್ಕಚಿಕ್ಕ ಅವಕಾಶಗಳೇ ಮುಂದೆ ದೊಡ್ಡ ರಹದಾರಿಯನ್ನು ಕಂಡುಕೊಳ್ಳಲು, ಸಾಧನೆಯ ಶಿಖರವನ್ನು ಏರಲು ಅನುವು ಮಾಡಿಕೊಡುತ್ತದೆ
ದೊಡ್ಡದಾದ ಕಡಿದಾದ ಬೆಟ್ಟ ಏರಬೇಕಾದರೆ ಕೈಯಲ್ಲಿ ಒಂದು ಕೋಲು ಮತ್ತು ಕತ್ತಿಯನ್ನು ಹಿಡಿದುಕೊಂಡು ದಾರಿ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತೇವೆ. ಇಲ್ಲಿ ಮುಂದೆ ಸಾಗಲು ಅವಕಾಶವೇ ಇಲ್ಲದಿದ್ದರೂ ನಮ್ಮ ಗುರಿ ತಲುಪಲು ಬೇಕಾದದ್ದನ್ನು ನಾವೇ ಮಾಡಿಕೊಳ್ಳುತ್ತೇವೆ. ಅಲ್ಲಿಗೆ ಹೋಗಲು ಮಾರ್ಗವಿಲ್ಲ ಎಂದು ಕೈಕಟ್ಟಿ ನಿಂತರೆ ತಲುಪಬೇಕಾದ ಗಮ್ಯಸ್ಥಾನವನ್ನು ತಲುಪಲು ಆಗದು. ಯಾರೋ ನಮಗೆ ದಾರಿ ಮಾಡಿಕೊಡುತ್ತಾರೆ ಎಂದು ಕಾಯುತ್ತಾ ಕುಳಿತವರು ಇದ್ದಲ್ಲೇ ಇರುತ್ತಾರೆ. 
ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡು ಮುಂದೆ ಸಾಗುವವರು ಸೇರಬೇಕಾದ ಅಂತಿಮ ಘಟ್ಟಕ್ಕೆ ತಲುಪುತ್ತಾರೆ. ಆದ್ದರಿಂದ ನಮ್ಮ ಗಟ್ಟಿ ನಿರ್ಧಾರ, ಯೋಚನೆ, ಜಾಣ್ಮೆ, ಚಿಂತನೆ, ಬುದ್ಧಿಶಕ್ತಿ, ಜ್ಞಾನ, ಕೌಶಲ್ಯ, ಎದೆಗಾರಿಕೆ, ಹಠ, ಅಚಲ ವಿಶ್ವಾಸ, ನಮ್ಮ ಮೇಲಿನ ಬಲವಾದ ನಂಬಿಕೆ, ಪೂರ್ವ ತಯಾರಿ... ಹೀಗೆ ಎಲ್ಲದನ್ನು ಬಳಸಿಕೊಂಡು ಮುಂದೆ ಸಾಗಿದರೆ ಆಕಾಶಕ್ಕೇ ಏಣಿ ಹಾಕಬಹುದು. ಗೆಲುವಿನ ಮೆಟ್ಟಿಲ್ಲನ್ನು ಏರಿ ನಮ್ಮತನವನ್ನು ಮೆರೆಯಬಹುದು. ಎತ್ತರಕ್ಕೆ ಏರಿದ ವ್ಯಕ್ತಿ ಎಲ್ಲರಿಗೂ ಕಾಣುತ್ತಾನೆ. ಎತ್ತರಕ್ಕೆ ಏರುವಾಗ ಆತ ಕ್ರಮಿಸಿದ ಕಷ್ಟದ ಹೆಜ್ಜೆಗಳ ಗುರುತುಗಳು ಯಾರಿಗೂ ಕಾಣುವುದಿಲ್ಲ. ಏಕ ಕಾಲಕ್ಕೆ ಫಾಸ್ಟ್ ಫುಡ್ ತರಹ ಸಾಧಕರಾಗಬೇಕು ಎಂಬವರಿಗೆ ದೃಢವಾಗಿ, ಸದಾಕಾಲ ಸಮಾಜದಲ್ಲಿ ಸಾಧನೆಯನ್ನು ಉಳಿಸಿಕೊಂಡು ಈ ಸ್ಫರ್ಧಾತ್ಮಕ ಜಗತ್ತಿನಲ್ಲಿ ಉಳಿಯಲಾಗದು.

ಜಾಹಿರಾತು 


ಅಲ್ಲದೆ ಅಧಿಕಾರ ಮತ್ತು ದುಡ್ಡು ಇರುವವರಿಗೂ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹಾಗಾಗಿ ಉತ್ತಮ ಶಿಕ್ಷಣ ಪಡೆದು, ಇತರರಿಗಿಂತ ಭಿನ್ನವಾಗಿದ್ದು, ಜ್ಞಾನಗಳಿಸಿ ಉನ್ನತ ಸ್ಥಾನ ಪಡೆದಾಗಲೂ ಅದು ಬೇಡವೆಂದು ನಮ್ಮ ಮುಂದೆ ಬಂದು ನಿಲ್ಲುತ್ತವೆ.
ಮರದಿಂದ ಮರ, ಬೆಟ್ಟದಿಂದ ಬೆಟ್ಟ ಎತ್ತರವಿರುತ್ತದೆ. ಆದ್ದರಿಂದ ಅzನ್ನು ಅರಿತು, ಕಲಿತುಕೊಂಡು ಮುಂದೆ ಸಾಗಬೇಕಾಗುತ್ತದೆ. ಜೀವನದಲ್ಲಿ ಪ್ರತಿ ಹೆಜ್ಜೆಯನ್ನೂ ಜಾರದಂತೆ ಇಡಬೇಕು. ಅವಕಾಶಗಳನ್ನು ಯಾರೂ ಕೊಡುವುದಿಲ್ಲ. ಎಷ್ಟೋ ಬಾರಿ ನಾವೇ ಹುಟ್ಟು ಹಾಕಬೇಕಾಗುತ್ತದೆ. ಪ್ರತಿಭೆ, ಪರಿಶ್ರಮ, ಅದೃಷ್ಟ ಎಲ್ಲವೂ ಇಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಅವಕಾಶ ಬಂದೇ ಬರುತ್ತದೆ. ಆಗ ಸರಿಯಾದ ಅವಕಾಶ ಯಾವುದು ಎಂಬ ಆಯ್ಕೆ ಕೂಡ ಮುಖ್ಯವಾಗುತ್ತದೆ. ಅದಕ್ಕೆ ಸೂಕ್ತ ಮಾರ್ಗದರ್ಶನ, ಆಯ್ಕೆಯ ಜಾಣ್ಮೆ, ನಮ್ಮ ಶಕ್ತಿಯ ಅರಿವು ಇರಬೇಕಾಗುತ್ತದೆ. ಅದನ್ನು ತಿಳಿದುಕೊಂಡು ಆ ನಿಟ್ಟಿನಲ್ಲಿ ತೊಡಗಿಕೊಂಡಾಗ ಅದೊಂದು ಅದ್ಬುತದ ಸೃಷ್ಟಿಗೆ, ನಮ್ಮತನದ ಪ್ರದರ್ಶನಕ್ಕೆ ಎಡೆಮಾಡಿಕೊಡುತ್ತದೆ. ಪ್ರಪಂಚದ ಮುಂದೆ ನಾವೇನು ಎಂಬುದನ್ನು ತೋರಿಸಲು ವೇದಿಕೆಯನ್ನು ಹುಟ್ಟು ಹಾಕುತ್ತದೆ. ಅದರಿಂದ ಒಬ್ಬ ವ್ಯಕ್ತಿ ಸೆಲೆಬ್ರೆಟಿಯಾಗಿ ಜನ ಗುರುತಿಸುವಂತಾಗುತ್ತದೆ. ಎಲ್ಲೆಡೆ ಎಲ್ಲರಿಂದ ಗೌರವಾದರ, ಪ್ರಶಸ್ತಿ ಸನ್ಮಾನ, ಸ್ಥಾನಮಾನ, ಆರ್ಥಿಕ ಸದೃಢತೆ ಎಲ್ಲವೂ ಬಂದು ನಮ್ಮ ಬಳಿ ಸೇರಲು ಸಾಧ್ಯವಾಗುತ್ತದೆ. 
ಒಂದು ಚಿಕ್ಕ ಕತೆಯನ್ನು ಇಲ್ಲಿ ಉದಾಹರಿಸಬೇಕೆನಿಸುತ್ತದೆ. ಒಂದು ಊರಿನಲ್ಲಿ ಒಬ್ಬ ಮಹಾನ್ ದೈವಭಕ್ತನಿದ್ದ. ಏನಿದ್ದರೂ ದೇವರಿದ್ದಾನೆ ಎಂದುಕೊoಡಿದ್ದ ವ್ಯಕ್ತಿ. ಅವನು ಒಮ್ಮೆ ತಪಸ್ಸು ಮಾಡುತ್ತಾ ಬೆಟ್ಟದ ಮೇಲೆ ಕುಳಿತಿದ್ದ. ಆಗ ಜೋರಾದ ಪ್ರವಾಹ ಬಂತು. ಇನ್ನೇನು ಆ ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಬೇಕು. ಆದರೂ ಆಗ ಆತ ದೇವರು ನನ್ನನ್ನು ಕಾಪಾಡುತ್ತಾನೆ ಎಂದು ಕುಳಿತಿದ್ದ. ಆಗ ಅಲ್ಲಿಗೆ ಒಂದು ದೋಣಿ ಬಂತು. ಬನ್ನಿ ಹತ್ತಿಕೊಳ್ಳಿ. ಇಲ್ಲದಿದ್ದರೆ ಕೊಚ್ಚಿಕೊಂಡು ಹೋಗುತ್ತೀರಿ ಎಂದರು. ಆದರೆ ಆ ದೈವಭಕ್ತ ನನ್ನನ್ನು ದೇವರು ಕಾಪಾಡುತ್ತಾನೆ. ನಾನು ಬರುವುದಿಲ್ಲ ಎಂದು ನಿರಾಕರಿಸಿದ. ಅನಂತರ ಹೆಲಿಕಾಪ್ಟರ್ ಬಂತು. ಬನ್ನಿ ಹತ್ತಿಕೊಳ್ಳಿ. ಇಲ್ಲದಿದ್ದರೆ ಸತ್ತೇ ಹೋಗುತ್ತೀರಿ ಎಂದರು. ಆದರೆ ದೈವಭಕ್ತ ನನ್ನನ್ನು ದೇವರು ಕಾಪಾಡುತ್ತಾನೆ ಎಂದು ಧ್ಯಾನ ಮಾಡುತ್ತಾ ಕುಳಿತಿದ್ದ. ಕೊನೆಗೆ ಪ್ರವಾಹ ಕೊಚ್ಚಿಕೊಂಡು ಹೋಗಿ ಆತನ ಪ್ರಾಣವೇ ಹೊರಟು ಹೋಯಿತು. ಆತ ಸತ್ತು ಸ್ವರ್ಗಕ್ಕೆ ಹೋದ. ಆಗ ಆತನಿಗೆ ದೇವರ ಮೇಲೆ ಸಿಟ್ಟು ಬಂತು. ಏನು ನಾನು ಅಷ್ಟೊಂದು ದೊಡ್ಡ ದೈವಭಕ್ತ. ನನ್ನೇಕೆ ಕಾಪಾದಲಿಲ್ಲ ಎಂದು ಪ್ರಶ್ನಿಸಿದ. ದೇವರನ್ನು ಮನಬಂದoತೆ ನಿಂದಿಸಿದ, ಬೈದ, ಹೀಯಾಳಿಸಿದ.
ಆಗ ದೇವರು “ನಿನ್ನನ್ನು ಬದುಕಿಸಲು ಎಂದು ದೋಣಿ ಕಳುಹಿಸಿಕೊಟ್ಟೆ, ಹತ್ತಿಕೊಳ್ಳಲಿಲ್ಲ., ಹೆಲಿಕಾಪ್ಟರ್ ಕಳಿಸಿಕೊಟ್ಟೆ ಹತ್ತಿಕೊಳ್ಳಲಿಲ್ಲ. ಆಗ ನೀನು ಹತ್ತಿಕೊಂಡಿದ್ದರೆ ಬದುಕಿರುತ್ತಿದ್ದೆ. ಕೊಟ್ಟ ಅವಕಾಶಗಳನ್ನು ಸರಿಯಾಗಿ ನೀನು ಬಳಸದ್ದರಿಂದ ನಿನಗೆ ಈ ಸ್ಥಿತಿ ಬಂದಿದೆ. ಆದ್ದರಿಂದ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳದೆ ಸೊಂಬೇರಿಯಾಗಿ, ಯಾರೋ ಮಾಡುತ್ತಾರೆ ಎಂದುಕೊoಡು ಸುಮ್ಮನಿದ್ದ ಕಾರಣ ಹೀಗಾಗಿದೆ’ ಎಂದು ಹೇಳಿದ. ಆಗ ಆ ದೈವ ಭಕ್ತಿನಿಗೆ ತನ್ನ ತಪ್ಪಿನ ಅರಿವಾಯಿತು. ಆದರೆ ಕಾಲ ಮಿಂಚಿಹೋಗಿತ್ತು. 

 ಜಾಹಿರಾತು 


ನಮ್ಮ ಮುಂದೆ ಸಿಗುವ ಅವಕಾಶಗಳು ಭೂಮಿಯಷ್ಟು ಆಳ, ಆಕಾಶದಷ್ಟು ಅಗಲ ಇರುತ್ತದೆ. ಅದನ್ನು ಹೇಗೆ ನೋಡುತ್ತೇವೆ. ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನದ ಪ್ರಗತಿ ನಿಂತಿದೆ. ಇಲ್ಲದಿದ್ದರೆ “ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರoತೆ’ ಎಂಬ ಹಾಗಾಗುತ್ತದೆ. ಆದ್ದರಿಂದ ಸದಾ ಎಚ್ಚರದಲ್ಲಿದ್ದು, ಎಚ್ಚರಿಕೆಯಿಂದ ನಮ್ಮ ಮುಂದಿನ ಗುರಿ ಏನು ಎಂದು ನಿರ್ಧರಿಸಬೇಕಾಗುತ್ತದೆ. ಅದರತ್ತ ದಾಪುಗಾಲು ಹಾಕಬೇಕಾಗುತ್ತದೆ. ಆಗ ಯಶಸ್ಸು ಕಟ್ಟಿಟ್ಟಬುತ್ತಿ. ಅದರ ನಮ್ಮ ಪ್ರಗತಯ ಪ್ರವಾಹಕ್ಕೆ ಯಾರಗೂ ತಡೆಗೋಡೆ ಕಟ್ಟಲಾರರು, ಕಟ್ಟಲಾಗದು. 
ಸ್ಪಷ್ಟತೆಯಿದ್ದಲ್ಲಿ ಗೊಂದಲಗಳು ಇರುವುದಿಲ್ಲ. ಆಗ ನಮ್ಮ ಸುತ್ತಮುತ್ತಲು ಸಿಗುವ, ಇರುವ ಅವಕಾಶಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಅದನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು. ಇದರಿಂದ ನಮ್ಮ ಹೆಸರನ್ನು ಆಕಾಶದಷ್ಟು ಅಗಲಕ್ಕೆ ಪಸರಿಸುವಂತೆ ಮಾಡಲು ಸಾಧ್ಯ.

 

- ಮುರಲಿಕೃಷ್ಣ ಬೆಳಾಲು
ಕವಿ, ಸಾಹಿತಿ, ಪತ್ರಕರ್ತರು