ಗೊಗ್ಗಯ್ಯ

"ಪಾರ್ವತಿ ಅರಿಶಿನದಲ್ಲಿ ಬೊಂಬೆ ಮಾಡಿ ಜೀವ ತುಂಬಿದಾಗ, ಗಣೇಶ ಬಂದ ಹಾಗೆ ನಾನು ಬೊಂಬೆಗೆ ಜೀವ ತುಂಬಬಹುದಾ?" ಹುಡುಗ ಬ್ರಹ್ಮ ಕೇಳಿದ. ಮೈ ಸೊರಗಿಸುವ ಬಿಸಿಲಿನಲ್ಲಿ, ಬಾಂಡ್ಲಿಯೊಳಗೆ ಸಿಮೆಂಟ್ ತುಂಬುತ್ತ ಅದನ್ನು ಮತ್ತೊಂದು ಕಡೆ ಹಾಕುತ್ತಿದ್ದ ಪಾರ್ತಿ ಈ ಕುಚೆಶ್ಟೆಯ ಪ್ರಶ್ನೆಗೆ ಉತ್ತರಿಸುವ ತಾಳ್ಮೆ ಇಲ್ಲದೆ ಗದರಿ ಕಳುಹಿಸದಳು. ಅಮ್ಮನ ಬೆನ್ಬಿಡದ ಬ್ರಹ್ಮ ಬಾಲಂಗೋಸಿಯಾಗಿ "ಅಮ್ಮ ಹೇಳಮ್ಮ, ಹೇಳು" ಎಂದು ಹಿಂದೆ ಹಿಂದೆಯೇ ಸುತ್ತಾಡಿದ. ಬಿಸಿಲಲ್ಲಿ ಬೆಂದು, ಕೆಲಸದಲ್ಲಿ ದಣಿದ ಪಾರ್ತಿ ಇವನ ಹಿಂಸೆ ತಾಳಲಾರದೆ," ಹೂ, ಜೀವ ಕೊಡ್ಬೋದು ಹೋಗೊ" ಎಂದೆಬಿಟ್ಟಳು. ಇದಕ್ಕಿಂತ ಮತ್ತೊಂದು ದೊಡ್ಡ ಅಪ್ಪಣೆ, ಉತ್ತರ ಬೇಕೆ? ರೋಗಿ ಬಯಸಿದ್ದು ಹಾಲು ಅನ್ನಾನೇ, ವೈದ್ಯ ನೀಡಿದ್ದು ಹಾಲು ಅನ್ನಾನೇ. ತಟ್ಟನೆ ಗುಡಸಲಿನೊಳಗೆ ಓಡಿದ್ದೇ ಗೊಂಬೆ ಮಾಡುವುದ್ಹೇಗೆಂದು ಯೋಚಿಸ ತೊಡಗಿದ. ಹೊರಗಿದ್ದ ಮಣ್ಣನ್ನು ಸಂಗ್ರಹಿಸಿ ತಂದದ್ದಾಯಿತು. ನಿಧಾನಕ್ಕೆ ಕಣ್ಣು, ಮೂಗು, ಬಾಯಿ, ಹಲ್ಲು, ನಾಲಿಗೆ, ಮೀಸೆ, ಕೊಂಬು, ಹೀಗೆ ಆಕಾರಗಳನ್ನು ನೀಡಿದ. ಗೊಂಬೆ ತಯಾರಾಯಿತು.  "ಆದರೇ ಜೀವವೇ ಬರಲಿಲ್ಲವಲ್ಲ.ಗೊಂಬೆ ಕದಲುತ್ತಿಲ್ಲ". ಚಿಂತಿಸಿದ. "ಹಾ! ಪಾರ್ವತಿ ಮಾಡಿದ ಗಣೇಶನಿಗೆ ಬಣ್ಣವಿತ್ತು. ಈ ಗೊಂಬೆಗೆ ಬಣ್ಣವೇ ಇಲ್ಲ. ಇನ್ನು ಜೀವ ಎಲ್ಲಿಂದ ಬಂತು?" ಅಂದುಕೊಂಡು ಬಣ್ಣಕ್ಕಾಗಿ ಹುಡುಕಾಡಿದ. ಎರಡು ಹೊತ್ತು ತಿನ್ನಲಿಕು ಒದ್ದಾಡುವ ಗುಡಿಸಲಿನಲ್ಲಿ ರಂಗೀಲ ಪೇಂಟ್ ಹೇಗಿರಲು ಸಾಧ್ಯ? ಹುಡುಗ ಬ್ರಹ್ಮ ತಲೆ ಕೆರೆದುಕೊಳ್ಳುತ್ತ ದೇವರ ಬಳಿ ಇದ್ದ ಅರಿಶಿನ, ಕುಂಕುಮ, ವಿಭೂದಿ, ಹಾಗೆಯೆ ಹಲ್ಲುಜ್ಜಲಿಕೆಂದಿದ್ದ ಇಜ್ಜಿಲನ್ನು ತಂದಿಟ್ಟುಕೊಂಡು ನೀರಿನಲ್ಲಿ ಕಲಿಸಿ ಕೈಯಲ್ಲೆ ಬಣ್ಣ ಹಚ್ಚ ತೊಡಗಿದ. ಕಣ್ಣಿಗೆ ಬಿಳಿ ಕಪ್ಪು, ಕೊಂಬಿಗೆ, ಹಲ್ಲಿಗೆ ಹೊಳೆಯುವ ಬಿಳಿ, ಕೆಂಪು ಉದ್ದ ನಾಲಿಗೆ, ಹೀಗೆ ತನಗೆ ತಿಳಿಯದೇ ಒಂದು ರಾಕ್ಷಸ ಸ್ವರೂಪದ ಗೊಂಬೆಯನ್ನೆ ಮಾಡಿದ್ದ.   ಆದರೇ ಬ್ರಹ್ಮನಿಗೆ ಅದರ ಆಕಾರ, ಸ್ವರೂಪಕ್ಕಿಂತ, ಅದಕ್ಕೇ ಜೀವ ಬರುವುದೇ ಅತಿ ಮುಖ್ಯವಾಗಿತ್ತು.ಹತ್ತು ನಿಮಿಷ ಅದನ್ನೆ ದಿಟ್ಟಿಸುತ್ತ ನೋಡಿದ್ದಾಯಿತು. ಗಾಳಿಯಲ್ಲಿ ಎತ್ತಿ ಹಿಡಿದು, ಕೆಳಗಿಳಿಸಿ, ಮೇಲೆತ್ತಿ , ಹಾಗೆ ತಿರುಗಿಸಿ, ಹೀಗೆ ತಿರುಗಿಸಿ, ಜೀವ ಬರಲಿ, ಜೀವ ಬರಲಿ ಎಂದು ಜಪಿಸಿದ್ದದಾಯಿತು. ಆದರೇ ಗೊಂಬೆ ಮಾತ್ರ ನಿರ್ಜೀವವಾಗಿ,ಮೌನವಾಗಿಯೆ ಅವನನ್ನು ದಿಟ್ಟಿಸುತ್ತಿತ್ತು..ಬ್ರಹ್ಮನ ಕಣ್ಣಿನಿಂದ ಹನಿಯೊಂದು ಬರುವುದೊಂದೇ ಬಾಕಿ ಉಳಿದಿತ್ತು.  ಹೊರಗೇ ಕೆಲಸ ಮಾಡುತ್ತಿದ್ದ ಪಾರ್ತಿಗೆ ಇದ್ದಕಿದ್ದ ಹಾಗೆ ಮಗ ನೆನಪಾದ.  " ಏನಿವನದು ಉಸಿರೇ ಇಲ್ಲವಲ್ಲ.ಬ್ರಹ್ಮ, ಬ್ರಹ್ಮ,..." ಕೂಗಿ ಕೂಗಿ ಸುಸ್ತಾಯಿತು. "ಎಲ್ಹೋದನಪ್ಪ ಈ ತರಲೇ?" ಎಂದುಕೊಳ್ಳುತ್ತ, ಬಾಟಲಿಯಲ್ಲಿದ್ದ ನೀರನ್ನು ಗಡಗಡನೇ ಕುಡಿದು, ಒಳಗೆ ಹೋದಳು.   

ADVERTISEMENT 

 

ಅಲ್ಲೊಂದು ದೊಡ್ಡ ಆಶ್ಚರ್ಯವೇ ಕಾದಿತ್ತು. ಅವನ ಕೈಗಳೆಲ್ಲವು ಬಣ್ಣ, ಮನೆಯೆಲ್ಲವು ಬಣ್ಣವೇ. ನೆತ್ತರು ಹರಿದಂತೆ ಕುಂಕುಮದ ನೀರು ಚೆಲ್ಲಿದರೆ, ಅಲ್ಲಲ್ಲಿ ಅರಶಿನ, ವಿಭೂದಿ, ಇಜ್ಜಿಲಿನ ಬಣ್ಣ ಬಣ್ಣದ ನೆಲ.. ಪಾರ್ತಿಗೆ ಕೋಪ ನೆತ್ತಿಗೇರಿಹೋಯಿತು.  ಹಣೆ ಜಜ್ಜಿಕೊಳ್ಳುತ್ತ "ಅಯ್ಯೋ, ಅಯ್ಯೋ, ಅಯ್ಯೋ ಏನೋ ಇದು. ಏನೋ ಮಾಡಿಟ್ಟಿದ್ದೀಯ. ದೇವರ ಕುಂಕುಮವನ್ನೆಲ್ಲ ಚೆಲ್ಲಿಟ್ಟಿದ್ದೀಯ. ಏನೊ ಬಂದಿರೋದು ದೊಡ್ರ್ಡೋಗ ನಿಂಗೆ" ಎಂದು ದನ ಬಡಿದ ಹಾಗೆ ಬಡಿದಳು. "ನೀನೆ ಅಲ್ಲಮ ಹೇಳಿದ್ದು ಪಾರ್ವತಿ ತರ ಗೊಂಬೆಗೆ ಜೀವ ತುಂಬ ಬಹುದು ಅಂತ. ಅದ್ಕೆ ಗೊಂಬೆ ಮಾಡಿದೆ. ಆದರೇ ಜೀವ ಬರ್ತ್ತಿಲ್ಲ. ನನ್ನ್ದೇನು ತಪ್ಪು?" ಬ್ರಹ್ಮ ನಿಸ್ಸಾಹಕನಾಗಿ ಬಿಕ್ಕಳಿಸಿದ. " ಅಯ್ಯೋ ದೇವರೇ, ಎಂತಹ ಮಗನ್ನ ಕೊಟ್ಯಪ್ಪ ನನಗೆ. ಗೊಂಬೆಗೆ ಹೇಗೊ ಜೀವ ಬರುತ್ತೆ? ಅಷ್ಟು ತಲೆ ಇಲ್ವ ನಿಂಗೆ. ಎಲ್ಲ ನಮ್ಹಣೆಬರಹ. ಅಲ್ಲು ದುಡಿಬೇಕು, ಇಲ್ಲು ಸಾಯ್ಬೇಕು." ಎಂದು ಮತಷ್ಟು ಹೊಡೆದಳು.  ಅದೃಷ್ಟವಶಾತ್ ಆ ಗೊಂಬೆ ಪಾರ್ತಿಯ ಕೋಪಕ್ಕೆ ಬಲಿಯಾಗಲಿಲ್ಲ. ಮೂಖಸಾಕ್ಷಿಯಾಗಿ, ಮೌನವಾಗಿ ಎಲ್ಲವನ್ನು ನೋಡುತ್ತ ಒಂದು ಮೂಲೆ ಸೇರಿತು.  ಒಂದಿನ ಪಾರ್ತಿ ಕೆಲಸ ಮಾಡುತ್ತಿದ್ದ ಮನೆಯ ಮೇಸ್ತ್ರಿ , ಪಾರ್ತಿ ಮನೆಯೊಳಗೆ ಏನನ್ನೊ ಕೊಡಲು ಬಂದಿದ್ದಾಗ ಮೂಲೆಯಲ್ಲಿದ್ದ ಗೊಂಬೆಯನ್ನು ಗಮನಿಸಿದರು. " ಯಾರಮ್ಮ ಮಾಡಿದ್ದು ಗೊಂಬೆನ?" ಕೇಳಿದರು. " ನನ್ನ ಮಗ ಸಾಮಿ"  "ಹೌದಾ! ತುಂಬ ಚೆನ್ನಾಗಿದೆ. ಗೊಂಬೆಗೆ ಒಳ್ಳೆ ಕಳೆ ಇದೆ. ಎಂತಹ ಆಕರ್ಶಕ ಕಣ್ಣು. ಹೊಸ ಮನೆ ಕಟ್ಟಿದಾಗ ಈ ಜನರ ದುಷ್ಟ ಕಣ್ಣನ್ನು ತಡೆಯಲಾಗುವುಗಿಲ್ಲ. ಈ ಗೊಂಬೆ ಕಣ್ಣಿಗೆ ದುಷ್ಟತನವನ್ನೇ ಓಡಿಸುವ ಶಕ್ತಿ ಇರುವ ಹಾಗಿದೆ. ಇದ್ದನ್ಯಾಕೆ ದೃಷ್ಟಿ ಬೊಂಬೆಯಾಗಿ ಬಳಸಬಾರದು? " ಏನೊ ನಂಗೊತ್ತಿಲ್ಲ ಸಾಮಿ" ಎಂದಳು, ಏನೂ ಅರ್ಥವಾಗದೇ ಪಾರ್ತಿ. "ನಂಗಿದು ಕೊಡ್ತಿಯಮ?" ಕೇಳಿದರು ಮೇಸ್ತ್ರಿ. ಬ್ರಹ್ಮನಿಗೆ ಕೋಪ ಬಂತು. ಯಾವುದೇ ಕಾರಣಕ್ಕೂ ಕೊಡಲ್ಲವೆಂದು ಹಟ ಹಿಡಿದನು. " ಇಲ್ಲಪ್ಪ ಇವತ್ತೊಂದಿನ ಕೊಡು. ನಾಳೆ ಮತ್ತೆ ಜೋಪಾನವಾಗಿ ವಾಪಸ್ಸು ತಂದು ಕೊಡ್ತಿನಿ." ಎಂದು ಮೆಲ್ಲನೆ ಬ್ರಹ್ಮನಿಗೆ ತಲೆ ಸವರಿ ಗೊಂಬೆ ತಗೆಕೊಂದು ಹೋದರು.  ತಿಂಗಳುಗಳು ಉರುಳಿದವು. ಕಾಲ ಕಳೆಯಿತು. ಬೀದಿ ಬೀದಿಯಲ್ಲಿ, ಪುಟ್ಟ ದಿಟ್ಟ ಮನೆಯ ಮೇಲೆ, ಎತ್ತರ ಎತ್ತರದ ಮನೆಯ ಮೇಲೆ, ಸಾಲು ಸಾಲು ಅಂಗಡಿಗಳ ಮೇಲೆ ಎಲ್ಲೆಲ್ಲೆಲಿಯು ದೃಷ್ಟಿ ಗೊಂಬೆಗಳು. ವಿಧ ವಿಧದ ಆಕಾರ, ವಿಧ ವಿಧದ ಬಣ್ಣ. ಅದರ ಮುಖಕ್ಕೆ ಜೋತು ಬಿದ್ದ ಶಂಖ, ನಿಂಬೆ ಹಣ್ಣು. ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು, ಚಳಿಯಲ್ಲಿ ಮಿಂದು ನೇತಾಡುತ್ತಿತ್ತು. ನಿರ್ಜೀವವಾಗಿ.  ಅಂದೊಂದು ರಾತ್ರಿ, ೭:೩೦. ಹುಣ್ಣಿಮೆಯ ಚಂದ್ರ ಬೆಳದಿಂಗಳನ್ನು ಚೆಲ್ಲುತಿದ್ದನು. ತೊಗರಿಬೆಳೆಯನ್ನು ಕುದಿಸಿದ ನೀರಿನಲ್ಲಿ ಕಲಿಸಿದ್ದ ಅನ್ನದ ಪರಿಮಳ ಗಾಳಿಯಲ್ಲಿ ಸೇರಿ ಘಮಘಮಿಸುತ್ತಿತ್ತು. ಒಂದು ಮಾಯೆಯ ಧ್ವನಿ ಕೇಳಿಸಿತು. " ಇದೊಂದು ತುತ್ತು. ಇದೊಂದೇ ಒಂದು ತುತ್ತು. ನನ್ನ ಬಂಗಾರ ಅಲ್ವ ನೀನು. ತಿಂದುಬಿಡಪ್ಪ." ಮಗು ಬೇಡವೆಂದು ಹಟ ಮಾಡುತ್ತಿತ್ತು. "ತಿನ್ನಲಿಲ್ಲ ಅಂದ್ರೆ ಗೋಗಯ್ಯ ಬರ್ತಾನೆ. ಅಲ್ನೋಡು ಗೊಗ್ಗಯ್ಯ...."  ಕಂಕಲಲ್ಲಿ ಮಗುವನ್ನು ಹಿಡಿದಿದ್ದ ತಾಯಿಯ ಬಲಗೈಯಿನ ತೋರುಬೆರಳು  ನೇರವಾಗಿ ಕಟ್ಟಡದ ಮೇಲಿದ್ದ  ದೃಷ್ಟಿ ಗೊಂಬೆಯೆಡೆಗೆ ತೋರಿಸಿತು.  ಎಳೆ ಮಗುವಿನ ಪಿಳಿ ಪಿಳಿ ಕಣ್ಣು, ಅಮ್ಮನ ಮುಖವನ್ನೊಮ್ಮೆ ನೋಡಿ, ತಟ್ಟೆಯನ್ನೊಮ್ಮೆ ನೋಡಿ, ಅಮ್ಮನ ತೋರುಬೆರಳನ್ನೆ ಹಿಂಬಾಲಿಸಿ, ಗೊಗ್ಗಯ್ಯನನ್ನು ನೋಡಿ ಭಯಗೊಂಡಂತೆ ಪಿಟಿಕ್ಕೆಂದು ಕಣ್ಮಿಟಕಿಸತು. ಅಬ್ಬಾ! ಅದೆಂತಹ ಸಂಚಲನ. ಮಿಂಚಿನಂತಹ ಹೊಳಪು! ಆ ಎಳೆ ಕಣ್ಣಿನಿಂದ ಗೋಗಯ್ಯನ ಆಕರ್ಶಕ ಕಣ್ಣನ್ನು ಪ್ರವೇಶಿಸಿ, ಅಂತರಾಳವನ್ನು ಪ್ರವೇಶಿಸಿ, ಗೊಗ್ಗಯ್ಯನ ಜೀವಾಳವನ್ನೆ ಎಚ್ಚಿತಿಸಿತು. ಬ್ರಹ್ಮ ಬಯಸಿದ ಜೀವ... ಅದ್ಯಾವ ಜನುಮದ ಅನುಭಂದವೊ? ಅದೇನು ಭಯವೊ? ಅದೆಷ್ಟು ಒಲವೊ? ಮಗುವನ್ನು ಎತ್ತಿಕೊಂಡಿದ್ದ ತಾಯಿಗೆ ಮಗು ಹೆದರುತ್ತಿದೆ ಅನಿಸಿದರು, ಗಂಟಲನ್ನು ಬಿಚ್ಚಿ ಮಾತನಾಡದ ಮಗು, ಚಲನವಲನಗಳಿಲ್ಲದೆ ನಿಗೂಢ ಜೀವಾಳವನ್ನು ಹೊತ್ತ ಗೊಗ್ಗಯ್ಯನ ನಡುವ ಮೂಡಿದ ಅನಂತ ಭಾವಗಳನ್ನು ಬಲ್ಲವರಾರು?  ಹಗಲಲ್ಲು ಇರುಳಲ್ಲು ಗೊಗ್ಗಯ್ಯನದೇ ಧ್ಯಾನ. ಲೋಕಕ್ಕೆಲ್ಲ ರಾಕ್ಷಸನಂತೆ, ದೃಷ್ಟಿ ಗೊಂಬೆಯಂತೆ ಕಂಡವನು ಮಗುವಿಗೆ ಹೇಗೆ ಕಾಣಿಸಿದನು? ಮಗು ಹೇಳಲಿಲ್ಲ. ಅವನನ್ನು ಕಂಡ ಆ ಕ್ಷಣ ಊಟ ಗುಳುಂ ಗುಳುಂ ಸ್ವಾಹ. ಅವನಿಂದಲೇ ನಿದ್ದೆಗೆ ಜಾರಿ ಹೋದಾಗ, ಅಲ್ಲು ಅವನದ್ದೆ ಕನಸು. ಕತ್ತಲಲ್ಲು ಅವನೇ, ಬೆಂಕಿಯಲ್ಲಿ ಅವನೇ, ನಲ್ಲಿಯಲ್ಲು ಅವನೇ, ಪ್ರಾಣಿಯಲ್ಲು ಅವನೇ, ಭಯದಲ್ಲು ಅವನೇ, ಅಳುವಲ್ಲು ಅವನೇ, ಕಿರುಚಾಟವು ಅವನಿಂದಲೇ, ಎಲ್ಲೇ ಎಲ್ಲೆಯಿಯು , ಸಕಲವು ಅವನೇ.....  ಕಾಲ ಬದಲಾದಂತೆ. ತಂತ್ರಜ್ಞಾನ ಬೆಳೆಯಿತು. ಅಂದು ಎಲ್ಲವು ಆಗಿದ್ದವನು, ಇಂದು ಏನೂ ಅಲ್ಲವಾಗಬಹುದು. ಅಂದಿದ್ದ ಭಾವ ಇಂದು ಬದಲಾಗಬಹುದು. ಮಗುವಿನ ಅಂತಾರಳದಲ್ಲಿ ಜೀವಿಸುತ್ತಿದ್ದ ಗೊಗ್ಗಯ್ಯನ ಸ್ಥಾನವನ್ನು ಮತ್ಯಾರೊ ಪಡೆದರು. ಅಮ್ಮನ ಬಾಯಲ್ಲಿ ಗೊಗ್ಗಯ್ಯ ಎಂಬ ಶಬ್ಧವೇ ಇಲ್ಲ. ಊಟವು ಅವನಿಂದಲ್ಲ. ನಿದ್ದೆಯು ಅವನಿಂದಲ್ಲ. ಒಂದು ದಿನ ಮಗು ಹೊರಗಿತ್ತು. ಅಮ್ಮನ ಕಂಕಳಲ್ಲಿ ಅಲ್ಲ. ಒಂದು ಗೊಂಬೆಯ ಕುರ್ಚಿ ಮೇಲೆ. ಗೊಗ್ಗಯ್ಯನನ್ನು ನೋಡುತ್ತಿಲ್ಲ. ಕೈಯಲ್ಲಿ ಏನೊ ಇತ್ತು. ಅದರಿಂದ ಶಬ್ದ, ಬೆಳಕು ಬರುತ್ತಿತ್ತು. ಮಗು ನೋಡಿ ನಗುತ್ತ, ತಳ್ಳಿ ತಳ್ಳಿ ನೋಡುತ್ತಿತ್ತು. ಅಮ್ಮನಿಗೆ ಅದು ಭಯವೆಂದು ಅನಿಸಲಿಲ್ಲ. ಗೊಗ್ಗಯ್ಯನಿಗೆ ಜೀವ ಹಿಂಡಿದಂತಾಗುತ್ತಿತ್ತು,ಹೊಂದಂತಾಯಿತು. ಜೀವ ಹೋಯಿತು, ಹೋಯಿತು, ಎಲ್ಲಿಗೊ? ಹೇಗೊ?  ಅದೇ ಕಟ್ಟಡದ ಮೇಲೆ ದೃಷ್ಟಿ ಗೊಂಬೆ  ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು, ಚಳಿಯಲ್ಲಿ ಮಿಂದು ನೇತಾಡುತ್ತಿತ್ತು. ನಿರ್ಜೀವವಾಗಿ.

 

-  ಶಿಲ್ಪ. ಬಿ